ಮೈತ್ರೇಯ -
ಬ್ರಹ್ಮರ್ಷಿ ಮಹಾಭಾರತ, ಭಾಗವತ, ವಿಷ್ಣುಪುರಾಣಗಳಲ್ಲಿ ಈತನ ಹೆಸರು ಉಲ್ಲೇಖಗೊಂಡಿದೆ. ಇವನ ತಂದೆ ತುಷಾರವ, ತಾಯಿ ಮಿತ್ರೆ, ಗುರು ಪರಾಶರ ಮುನಿ. ಧರ್ಮರಾಯ ಇಂದ್ರಪ್ರಸ್ಥದಲ್ಲಿ ಸಾಮ್ರಾಟನಾದ ಸಮಯದಲ್ಲಿ ಸಭಾಭವನಕ್ಕೆ ಆಹ್ವಾನಿಸಿದ ಮಹರ್ಷಿಗಳಲ್ಲಿ ಮೈತ್ರೇಯನೂ ಒಬ್ಬ (ದೇವಲ, ಬಕದಾಲ್ಚ್ಯ, ಕೌಶಿಕ, ಧಾಮ್ಯ, ರೋಮಹರ್ಷಣ, ಭೃಂಗು). ದ್ಯೂತದ ನಿಯಮದಂತೆ ಪಾಂಡವರು ವನವಾಸ, ಅe್ಞÁತವಾಸಗಳನ್ನು ಆಚರಿಸಲು ಕಾಡಿಗೆ ತೆರಳಿದರೂ ಅವರಿಗೆ ಕೌರವರಿಂದ ಕಿರುಕುಳ ತಪ್ಪಲಿಲ್ಲ. ಆಗ ಧೃತರಾಷ್ಟ್ರನ ಬಳಿಗೆ ವ್ಯಾಸ ಬಂದು "ನಿನ್ನ ಮಗ ಪಾಂಡವರಲ್ಲಿ ಹಗೆ ಸಾಗಿಸುತ್ತಿದ್ದಾನೆ. ಇದರಿಂದ ನಿನ್ನ ಮಕ್ಕಳಿಗೆ ಕೇಡಾಗುವುದರಲ್ಲಿ ಸಂದೇಹವಿಲ್ಲ. ಮುಂದೆ ಪೂಜ್ಯನಾದ ಮೈತ್ರೇಯ ನಿನ್ನ ಮಕ್ಕಳನ್ನು ಕಾಣಲು ಬರುವನು. ಆಗ ಅವನ ಉಪದೇಶವನ್ನು ಕೇಳಿದರೆ ಭವಿಷ್ಯದಲ್ಲಿ ನಿನ್ನ ಮಕ್ಕಳಿಗೆ ಶ್ರೇಯಸ್ಸಾಗುವುದು. ಇಲ್ಲವಾದರೆ ನಿನ್ನ ಮಕ್ಕಳು ನಾಶವಾಗುವರು. ಆದುದರಿಂದ ಮೈತ್ರೇಯ ಬೋಧಿಸುವ ನ್ಯಾಯಮಾರ್ಗವನ್ನು ಅನುಸರಿಸಲು ನಿನ್ನ ಮಗನಿಗೆ ತಿಳಿಸು." ಎಂದು ಎಚ್ಚರಿಸಿ ಹೊರಟು ಹೋದನು. ಕೆಲವು ದಿನಗಳ ಅನಂತರ ಧೃತರಾಷ್ಟ್ರನ ಬಳಿಗೆ ಮೈತ್ರೇಯ ಆಗಮಿಸಿ, ಪಾಂಡವರು ಕಾಡಿನಲ್ಲಿ ಕಷ್ಟಕರ ಜೀವನವನ್ನು ನಡೆಸಿರುತ್ತಿರುವುದನ್ನೂ ತಾನೂ ತೀರ್ಥಯಾತ್ರೆಯಲ್ಲಿ ಕಂಡು ಮನನೊಂದುಕೊಂಡುದನ್ನೂ ಭೀಷ್ಮರು ಬದುಕಿರುವಾಗಲೇ ಪಾಂಡವರು ಕೌರವರು ದ್ವೇಷ ಸಾಧಿಸುತ್ತಿರುವುದು ಒಳ್ಳೆದಲ್ಲವೆಂದೂ ರಾಜಸಭೆಯಲ್ಲಿ ದ್ರೌಪದಿಗೆ ಆದ ಅವಮಾನದಿಂದಾಗಿ ಇಡೀ ಮುನಿಸಂಕುಲದಲ್ಲಿ ನಿನ್ನ ಬಗ್ಗೆ ಅಸಮಧಾನವುಂಟಾಗಿದೆ ಎಂದೂ ತಪ್ಪಿತಸ್ಥರನ್ನು ನ್ಯಾಯದಂತೆ ದಂಡಿಸುವ ಅಧಿಕಾರ ನಿನಗಿದೆಯೆಂದೂ ಉಪೇಕ್ಷಿಸುವುದರಿಂದ ಮುಂದೆ ಅನಾಹುತವಾಗುವುದು ಖಂಡಿತವೆಂದೂ ಉಪದೇಶಿಸಿದ. ಅನಂತರ ದುರ್ಯೋಧನನ ಬಳಿಗೆ ಹೋಗಿ : ನೀನು ಪಾಂಡವರಲ್ಲಿ ಶತ್ರುತ್ವವನ್ನು ಸಾಧಿಸಬೇಡ. ಇದರಿಂದ ನಿನಗೆ ಶ್ರೇಯಸ್ಸಾಗದು. ಪಾಂಡವರು ಬಲಾಢ್ಯರು. ಅವರಿಗೆ ಸದಾರಕ್ಷೆಯಾಗಿ ಶ್ರೀಕೃಷ್ಣನಿದ್ದಾನೆ. ದ್ರೌಪದಿಯನ್ನು ಅರ್ಜುನ ವಿವಾಹವಾಗುವುದರಿಂದ ದ್ರುಪದನ ಪುತ್ರರಲ್ಲೇ ಮೈದುನರು. ಕಮ್ಮೀರ, ಬಕ, ಡಿಂಬರನ್ನು ಪಾಂಡವರು ನಿಗ್ರಹಿಸಿದ್ದಾರೆ. ಆದುದರಿಂದ ಪಾಂಡವರಲ್ಲಿ ಸ್ನೇಹದಿಂದಿರುವುದೇ ಶ್ರೇಷ್ಠಮಾರ್ಗ" ಎಂದು ನೀತಿಬೋಧೆ ಮಾಡಿದ. ಆದರೆ ದುರ್ಯೋಧನಿಗೆ ಈ ಮಾತುಗಳು ಹಿಡಿಸಲಿಲ್ಲ. ನೇರವಾಗಿ ಉತ್ತರವನ್ನು ಕೊಡದೆ ತೊಡೆ ತಟ್ಟಿ ಶೌರ್ಯಪ್ರದರ್ಶನ ಮಾಡಿದ. ಅವಮಾನದಿಂದ ಕುಪಿತನಾದ ಮೈತ್ರೇಯ "ತೊಡೆ ತಟ್ಟಿ ಅವಮಾನ ಮಾಡಿದ್ದರಿಂದ ನಿನಗೆ ತೊಡೆಯಲ್ಲಿಯೇ ಮರಣ ಸಂಭವಿಸಲಿ. ಆ ಕೆಲಸವನ್ನು ಭೀಮ ನೆರವೇರಿಸಲಿ" ಎಂದು ಶಪಿಸಿದ. (ಹಿಂದೆ ರಾಜಸಭೆಯಲ್ಲಿ ಅವಮಾನಿತಳಾದ ಸಂದರ್ಭದಲ್ಲಿ ದ್ರೌಪದಿ ಕೂಡ ತೊಡೆಯಲ್ಲಿ ಸಾವು ಬರಲಿ ಎಂದು ದುರ್ಯೋಧನನ್ನು ಶಪಿಸಿದ್ದಳು.) ಧೃತರಾಷ್ಟ್ರ ಈ ಶಾಪ ಸಂಗತಿಯನ್ನು ಕೇಳಿ ಭಯಭೀತನಾಗಿ ಶಾಪವಿಮೋಚನೆಗೆ ಪ್ರಾರ್ಥೀಸಿದ. ಪಾಂಡವರು ದ್ವೇಷವನ್ನು ತ್ಯಜಿಸಿ ಸ್ನೇಹದಿಂದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಶಾಪ ಹುಸಿಯಾಗುವುದಿಲ್ಲವೆಂದು ತಿಳಿಸಿ ಮೈತ್ರೇಯ ನಿರ್ಗಮಿಸಿದ.

ಪಾಂಡವರಿಗಾದ ಅನ್ಯಾಯವನ್ನು ವಿದುರ ನೋಡಲಾರದೆ ಧೃತರಾಷ್ಟ್ರನಿಗೆ ಬುದ್ದಿ ಹೇಳಿದಾಗ ದುಶ್ಯಾಸನನ ದುರ್ಯೋಧನರು ಅವನನ್ನು ಹೀಯಾಳಿಸಿದರು. ಬೇಸತ್ತು ಆತ ಹಸ್ತಿನಾಪುರವನ್ನು ತ್ಯಜಿಸಿ ತೀರ್ಥಯಾತ್ರೆಗೆ ತೆರಳಿದ. ಮರಳಿ ಬಂದಾಗ ಕೌರವರು ನಾಶಹೊಂದಿ, ಪಾಂಡವರು ರಾಜ್ಯಭಾರ ಸೂತ್ರವನ್ನು ವಹಿಸಿಕೊಂಡಿದ್ದರು. ಶ್ರೀಕೃಷ್ಣನ ಭಕ್ತನಾದ ಉದ್ದವ ಮಹಾಭಾರತ ಯುದ್ದದ ವಿಷಯವನ್ನು ವಿದುರನಿಗೆ ವಿವರಿಸಿ, ಕೃಷ್ಣನೂ ನಿರ್ಯಾಣ ಹೊಂದಿದ ಸಮಾಚಾರವನ್ನು ತಿಳಿಸಿ ಆತ್ಮe್ಞÁನವನ್ನು ಪಡೆಯಲು ಮೈತ್ರೇಯನನ್ನು ನೋಡುವಂತೆ ಹೇಳಿದ. ಅದರಂತೆ ವಿದುರ ಗಂಗಾನದಿಯ ತೀರದ ಹರಿದ್ವಾರದಲ್ಲಿ ಮೈತ್ರೇಯನನ್ನು ಸಂಧಿಸಿ ಅವನಿಂದ ಬೋಧನೆಯನ್ನು ಪಡೆದುಕೊಂಡ. 			
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ